ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ದುಬೈ ಬಿಕ್ಕಟ್ಟು; ‘ಭೂಮಿ ನಡುಗುವಂತಹದ್ದೇನಲ್ಲ’-ಪ್ರಣವ್ ಮುಖರ್ಜಿ

ದುಬೈ ಬಿಕ್ಕಟ್ಟು; ‘ಭೂಮಿ ನಡುಗುವಂತಹದ್ದೇನಲ್ಲ’-ಪ್ರಣವ್ ಮುಖರ್ಜಿ

Sun, 29 Nov 2009 02:52:00  Office Staff   S.O. News Service
ಚಂಡೀಗಡ (ಪಿಟಿಐ): ‘ದುಬೈ ಬಿಕ್ಕಟ್ಟಿನ ಪರಿಣಾಮವನ್ನು ಇನ್ನು ಮೇಲೆ ಲೆಕ್ಕಹಾಕಬೇಕಾಗಿದೆ. ಆದಾಗ್ಯೂ, ಆತಂಕಪಡುವಂತಹ ಸ್ಥಿತಿ ಇಲ್ಲ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ಬಿಕ್ಕಟ್ಟಿನಲ್ಲಿ ಸಿಲುಕಿರುವ ಮೊತ್ತ ಸಣ್ಣ ಪ್ರಮಾಣದ್ದಾಗಿದೆ. ಇದಲ್ಲದೇ, ದುಬೈ ವ್ಯವಸ್ಥೆಯೊಂದಿಗೆ ವ್ಯವಹರಿಸುವ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸೀಮಿತವಾಗಿದೆ. ಇದರಿಂದಾಗಿ ಹೆಚ್ಚೇನೂ ಪರಿಣಾಮ ಬೀರದು’ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

‘ಆದಾಗ್ಯೂ, ತಕ್ಷಣಕ್ಕೆ ಇದರ ಪರಿಣಾಮ ಷೇರು ಪೇಟೆಯ ಮೇಲೆ ಆಗುವುದು ಖಚಿತ. ನಿನ್ನೆಯ ವಹಿವಾಟಿನಲ್ಲಿ ಇದನ್ನು ಗಮನಿಸಬಹುದಾಗಿದೆ’ ಎಂದರು.

ಆ ದೇಶಕ್ಕೆ ಮಾಡಲಾಗುವ ರಫ್ತಿನ ಮೇಲೂ ಇದು ಪರಿಣಾಮ ಬೀರದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯವಾಗಿ ವಿದೇಶಿ ವಿನಿಮಯ ಹಾಗೂ ಅಲ್ಲಿನ ಉದ್ಯೋಗಾವಕಾಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದು ಅಂದಾಜಿಸಿದರು. 


ದುಬೈನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಸ್ಥಿತಿ ಏನಾಗಬಹುದು? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಲ್ಲಿ ದುಡಿಯುತ್ತಿರುವ ಭಾರತೀಯರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು, ಹಾಗೂ ಅದನ್ನು ಯಾವ ರೀತಿ ನಿಭಾಯಿಸಬಹುದು ಎನ್ನುವುದನ್ನು ಪರಿಶೀಲಿಸುತ್ತೇವೆ. ಆದಾಗ್ಯೂ, ಇದು ಬಹಳಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ನನಗನಿಸುವುದಿಲ್ಲ’ ಎಂದು ಹೇಳಿದರು. 

ದುಬೈನಲ್ಲಿರುವ ಶೇ 42.3ರಷ್ಟು ವಾಸಿಗಳು ಭಾರತ ಮೂಲದವರಾಗಿದ್ದಾರೆ. ಈ ಬಿಕ್ಕಟ್ಟಿನ ನಂತರ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ‘ನಿಭಾಯಿಸಬಹುದಾಗಿದೆ’ ಹಾಗೂ ಈ ಪರಿಸ್ಥಿತಿಯತ್ತ ಸರ್ಕಾರ ತೀವ್ರ ನಿಗಾವಹಿಸಿದ್ದು, ಪ್ರತಿ ಕ್ಷಣದ ಬೆಳವಣಿಗೆಯನ್ನು ಗಮನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
 
ಸೌಜನ್ಯ: ಪ್ರಜಾವಾಣಿ 

Share: